ಮೈಸೂರು: ಸರಗೂರು ತಾಲೂಕಿನ ಬೇಲದಕುಪ್ಪೆ ದೇವಸ್ಥಾನ ಪ್ರವೇಶ ದ್ವಾರದ ಅರಳಹಳ್ಳಿ ಚೈನ್ ಗೇಟ್ ಬಳಿ ಒಂಟಿ ಸಲಗವೊಂದು ದಾಂಧಲೆ ನಡೆಸಿದ್ದು, ಐದಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿರುವ ಘಟನೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಅರಣ್ಯದ ಹೆಡಿಯಾಲ ಅರಣ್ಯ ವಲಯ ಪ್ರದೇಶದಿಂದ ಹೊರ ಬಂದ ಕಾಡಾನೆಯೊಂದು ಕಾಡಿಗೆ ಹೊಂದಿಕೊಂಡಂತಿರುವ ಚೈನ್‌ಗೇಟ್ ಬಳಿ ಜಮೀನಿನಿಂದ ಕಾಡಿನತ್ತ ಹೋಗುತ್ತಿತ್ತು. ಆಗ ದೇವಸ್ಥಾನಕ್ಕೆ ತೆರಳಿದ್ದ ಭಕ್ತರು ಕೂಗಿದ ಹಿನ್ನೆಲೆ ಗಾಬರಿಗೊಂಡ ಸಲಗ ಚೈನ್‌ಗೇಟ್ ಬಳಿ ಇರುವ ಅರಣ್ಯ ಇಲಾಖೆ ಕಚೇರಿ ಎದುರುಗಡೆ ನಿಲ್ಲಿಸಿದ್ದ ಬೈಕ್‌ಗಳನ್ನು ಧ್ವಂಸಗೊಳಿಸಿದೆ. ಅಲ್ಲದೆ ಮಳಿಗೆಯನ್ನೂ ನಾಶಗೊಳಿಸಿದ್ದು, ನಾಮಫಲಕದ ಹಲಗೆಯನ್ನು ಕಿತ್ತುಹಾಕಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೇಲದಕುಪ್ಪೆ ಮಹದೇಶ್ವರಸ್ವಾಮಿ ಸ್ವಾಮಿಯ ದರ್ಶನಕ್ಕೆ ಆಗಮಿಸಿದ ಭಕ್ತರು ಪಕ್ಕದಲ್ಲೇ ಇದ್ದ ಅರಣ್ಯ ಇಲಾಖೆ ಕಚೇರಿ, ನಾಲ್ಕು ಚಕ್ರದ ವಾಹನದಲ್ಲಿ ಕುಳಿತುಕೊಂಡು ಆನೆ ದಾಂಧಲೆ ನಡೆಸಿದ ವೀಡಿಯೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಆನೆ ಕಾಡಿನತ್ತ ಹೊರಟು ಹೋಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೈಲದ ಕುಪ್ಪೆ ಮಹದೇಶ್ವರ ದೇವಸ್ಥಾನಕ್ಕೆ ಹೋಗುವಾಗ ಚೆಕ್‌ಪೋಸ್ಟ್ ಬಳಿ ವಾಹನಗಳನ್ನು ನಿಲ್ಲಿಸಿ ಹೋಗುಬೇಕು. ದೇವಾಲಯಕ್ಕೆ ಬಂದ ಭಕ್ತರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪೂಜೆಗೆ ತೆರಳಿದ್ದರು.
ಇದನ್ನೂ ನೋಡಿ: ಆನೆ-ಮಾನವ ಸಂಘರ್ಷ ತಡೆಗೆ 'AI' ಕಾವಲು: 2 ವರ್ಷದಲ್ಲಿ 6 ಸಾವಿರ ಆನೆಗಳ ಜೀವ ರಕ್ಷಣೆ