Surprise Me!

ಮೈಸೂರು: ಈ ಜಾತ್ರೆಯಲ್ಲಿ ಹೆಣ್ಣುಮಕ್ಕಳ ವಿಡಿಯೋ ಮಾಡಂಗಿಲ್ಲ, ಮದ್ಯ ಕುಡಿಯಂಗಿಲ್ಲ; ತಪ್ಪಿದ್ರೆ ₹30 ಸಾವಿರ ದಂಡ!

2026-02-09 11 Dailymotion

ಮೈಸೂರು: ''ಈಗ ನಡೆಯೋ ಜಾತ್ರೆನಾಗ ಕುಡಿದು ಗಲಾಟೆ ಮಾಡೋದಾಗಲಿ, ಜಾತ್ರೆಗೆ ಬರೋ ಹೆಣ್ಣುಮಕ್ಕಳನ್ನ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ಕೊಡಬೇಕಾಗುತ್ತೆ ಕಣ್ರಪ್ಪೋ..'' ಹೀಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಡಂಗುರ ಸಾರಿ, ಎಚ್ಚರಿಕೆ ನೀಡಲಾಗಿದೆ. ಹೌದು, ಗ್ರಾಮದೇವತೆ ಜಾತ್ರೆಲಿ ಊರಿನ ಈ ಕಟ್ಟುಪಾಡು ಉಲ್ಲಂಘಿಸಿ, ಅಸಭ್ಯವಾಗಿ ವರ್ತಿಸಿದರೆ 30ಸಾವಿರ ರೂಪಾಯಿ ದಂಡ ಫಿಕ್ಸ್​ ಮಾಡಲಾಗಿದೆ. ಮಂಗಳವಾರ ಅಂದ್ರೆ ಫೆ. 10 ರಿಂದ ಆರಂಭವಾಗಲಿರುವ ಜಾತ್ರೆ ಮೂರು ದಿನಗಳ ಕಾಲ ಜರುಗಲಿದೆ. ಈ ಹಿನ್ನೆಲೆ ಹೆಣ್ಣುಮಕ್ಕಳ ವಿಡಿಯೋ ತೆಗೆಯುವುದು ಅಥವಾ ಮದ್ಯ ಕುಡಿದು ಗಲಾಟೆ ಮಾಡುವ ವಿಚಾರದಲ್ಲಿ ಊರಿನ ಮುಖಂಡರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಗ್ರಾಮದ ನಿವಾಸಿ ಚಕ್ರಜವರ ಎಂಬುವರ ಮೂಲಕ ತಮಟೆ ಭಾರಿಸಿ ಡಂಗುರ ಸಾರಿಸಲಾಗಿದೆ. ಈ ಕುರಿತು ಮಾತನಾಡಿದ ಗ್ರಾಮ ಪಂಚಾಯತ್​ ಸದಸ್ಯ ಮಹದೇವಶೆಟ್ಟಿ, ಇದು ನಮ್ಮೂರಿನ ಜಾತ್ರೆ ಸಂದರ್ಭದಲ್ಲಿ ಗ್ರಾಮಸ್ಥರೇ ಮಾಡಿಕೊಂಡಿರುವ ಸಣ್ಣಪುಟ್ಟ ಕಟ್ಟುಪಾಡು. ಏಳೂರು ಹಬ್ಬಕ್ಕಿಂತ ಗೋಳೂರು ಹಬ್ಬ ಚೆಂದ ಎಂಬ ಮಾತಿದೆ. ಇದಕ್ಕಾಗಿ ಒಂದು ತಿಂಗಳುಗಟ್ಟಲೇ ಬಾಳ ಕಟ್ಟುನಿಟ್ಟಿನಿಂದ ಹಬ್ಬ ಮಾಡ್ತೇವೆ. ಈ ವೇಳೆ ಊರಿನವರು ಮನೆಯಲ್ಲಿ ಒಗ್ಗರಣೆ ಹಾಕುವುದಿಲ್ಲ, ದೋಸೆ ಮಾಡಂಗಿಲ್ಲ, ನಾನ್​ವೆಜ್​ ಮಾಡಂಗಿಲ್ಲ. ಜಾತ್ರೆ ಸಂದರ್ಭದಲ್ಲಿ ಪೊಲೀಸರು ಸಹ ಹಾಜರಿರುತ್ತಾರೆ, ಕಾನೂನುಬಾಹಿರ ಕೆಲಸಗಳೇನಾದ್ರು ನಡೆದ್ರೆ ಅವರೇ ಕ್ರಮ ಕೈಗೊಳ್ತಾರೆ ಎಂದು ಹೇಳಿದ್ರು.

ಇದನ್ನೂ ಓದಿ: ಸುಗಮ ಸಂಚಾರಕ್ಕೆ ಮೈಸೂರು ನಗರದಲ್ಲಿ 50 ಹೊಸ ಸಿಗ್ನಲ್ ಲೈಟ್ ಅಳವಡಿಕೆ